ಪಾಲಕರ ಕುರಿತಂತೆ ನಮ್ಮ ಸೇವೆ:
ವಿಶೇಷ ಮಕ್ಕಳ ಪಾಲಕರು ಸದಾ ಅವರ ಭವಿಷ್ಯದ ಕುರಿತು ಚಿಂತಿಸುತ್ತ ಸದಾ ಒತ್ತಡಕ್ಕೆ ಒಳಗಾಗಿರುತ್ತಾರೆ. ಆರ್ಥಿಕ ತೊಂದರೆ, ಕೌಟುಂಬಿಕ ಒತ್ತಡಗಳ ಜೊತೆಗೆ ಸಾಮಾಜಿಕವಾಗಿ ಮೂಲೆಗುಂಪಾಗುವ ಭೀತಿಯನ್ನೂ ಎದುರಿಸುತ್ತಿರುತ್ತಾರೆ. ಹೀಗಾಗಿ, ಈ ಮಕ್ಕಳ ಆರೋಗ್ಯ ಪಾಲನೆ ಮತ್ತು ಶೈಕ್ಷಣಿಕ ಪ್ರಗತಿ ಸಾಧನೆಗೆ ಶ್ರಮಿಸುವಲ್ಲಿ ಪಾಲಕರು ಸದಾ ತೀವ್ರ ಒತ್ತಡ ಎದುರಿಸುತ್ತಿರುತ್ತಾರೆ.
ಹೀಗಾಗಿ ಈ ಪಾಲಕರ ಬೆಂಬಲಕ್ಕೆ ಸದಾ ಒದಗುವುದು ಕೂಡ ನಮ್ಮ ಆಶಯ. ಕಾಲಕಾಲಕ್ಕೆ ಪಾಲಕರ ಸಮಾಲೋಚನಾ ಸಭೆಗಳು ಮತ್ತು ಅವರಿಗಾಗಿ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಈ ಸಂಸ್ಥೆ ಹಮ್ಮಿಕೊಳ್ಳುತ್ತದೆ. ಅಗತ್ಯವಿದ್ದಲ್ಲಿ, ವ್ಯಕ್ತಿಗತವಾಗಿ ತಜ್ಞ ವೈದ್ಯರಿಂದ ಆಪ್ತ ಸಲಹೆಯನ್ನೂ ನೀಡಲಾಗುತ್ತದೆ.
ವಿಶೇಷ ಕಾರ್ಯಕ್ರಮಗಳು:
ವಿಶೇಷ ಮಕ್ಕಳ ಸರ್ವತೋಮುಖ ಅಭ್ಯುದಯದ ಹಿನ್ನಲೆಯಲ್ಲಿ ನಮ್ಮ ಸಂಸ್ಥೆ ಈ ಕೆಳಗಿನ ಪ್ರಮುಖ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
ವಿಶೇಷ ಮಕ್ಕಳಿಗೆ ಉತ್ಕೃಷ್ಟಮಟ್ಟದ ಶಿಕ್ಷಣ ನೀಡಲು ಬೇಕಾದ ಎಲ್ಲ ಪರಿಕರಗಳೊಂದಿಗೆ ಉತ್ತಮ ಕಲಿಕಾ ಪರಿಸರ ರೂಪಿಸುವುದು ಮತ್ತು ನುರಿತ ಶಿಕ್ಷಕರಿಂದ ತರಬೇತಿ ನೀಡುವುದು.
ವಿಶೇಷ ಮಕ್ಕಳ ಆರೋಗ್ಯವರ್ಧನೆ ದೃಷ್ಟಿಯಿಂದ ತಜ್ಞ ವೈದ್ಯರ ಮೂಲಕ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದು, ಅಗತ್ಯವಿದ್ದಲ್ಲಿ ಚಿಕಿತ್ಸೆ ಕೊಡಿಸುವುದು ಮತ್ತು ಫಿಸಿಯೋ ಥೆರಪಿ ಮತ್ತು ಸ್ಪೀಚ್ ಥೆರಪಿ ಸೌಲಭ್ಯವನ್ನು ಒದಗಿಸುವುದು.
ಎಲ್ಲ ಶಿಕ್ಷಕರಿಗೆ ನಿರಂತರವಾಗಿ ಶಿಕ್ಷಣ ತಜ್ಞರು ಮತ್ತು ನುರಿತ ವೈದ್ಯರಿಂದ ನಿಯಮಿತವಾಗಿ ತರಬೇತಿ ಒದಗಿಸುವುದು.
ವಿಶೇಷ ಮಕ್ಕಳ ಮುಂದಿನ ಬದುಕು ಸುಸ್ಥಿರವಾಗಿರುವಂತೆ ಮಾಡಲು ಸೂಕ್ತ ಸಮುದಾಯ ಕೇಂದ್ರಿತ ಹಾಗು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬಲ್ಲ ಕೌಶಲ್ಯಗಳ ತರಬೇತಿ ಹಮ್ಮಿಕೊಳ್ಳುವುದು.
ವಿಶೇಷ ಮಕ್ಕಳ ಬದುಕು, ಅವರ ಆರೋಗ್ಯ ಮತ್ತು ಶಿಕ್ಷಣ, ಸಮಾಜದಲ್ಲಿ ಅವರಿಗೆ ನೀಡಬೇಕಾದ ಸಮಾನ ಅವಕಾಶಗಳು – ಈ ಎಲ್ಲದರ ಸುತ್ತಲಿನ ಸಮಾಜದಲ್ಲಿ ಜಾಗೃತಿ ಮೂಡುವತ್ತ ಒಂದು ವ್ಯವಸ್ಥಿತ ಮಾಹಿತಿಕೇಂದ್ರ ಮತ್ತು ಗ್ರಂಥಾಲಯ ತೆರೆಯುವುದು.